ಎಲ್ಲೋರಾ

ಮಹಾರಾಷ್ಟ್ರದಲ್ಲಿ ಗೋದಾವರಿಯ ಉಪನದಿಯೊಂದರ ದಂಡೆಯ ಮೇಲೆ, ಅಜಂತದಿಂದ ನೈರುತ್ಯದಲ್ಲಿ 40 ಮೈಲಿಗಳ ದೂರದಲ್ಲೂ ಔರಂಗಾಬಾದಿನಿಂದ ವಾಯುವ್ಯದಲ್ಲಿ 16 ಮೈಲಿಗಳ ದೂರದಲ್ಲೂ ಇರುವ ಪ್ರಸಿದ್ಧ ಸ್ಥಳ. ಬೌದ್ಧ, ಹಿಂದೂ ಮತ್ತು ಜೈನ ಮತಗಳಿಗೆ ಸೇರಿದ 34 ಗುಹೆಗಳೂ ಒಂದೇ ಕಲ್ಲಿನಲ್ಲಿ ಕಡೆಯಲಾಗಿರುವ ದ್ರಾವಿಡ ಶೈಲಿಯ ಸುಪ್ರಸಿದ್ದ ಕೈಲಾಸ ದೇವಾಲಯವೂ ಇರುವ ಈ ಊರು ಭಾರತೀಯ ಕಲೆಯ ಮುಖ್ಯ ಕೇಂದ್ರಗಳಲ್ಲೊಂದಾಗಿದೆ. ಇಲ್ಲಿನ ಇಳಿಜಾರಾದ ಬೆಟ್ಟದ ಪಶ್ಚಿಮದ ಅಂಚಿನಲ್ಲಿ ಕಡೆದಿರುವ ಗುಹಾಂತರ ದೇವಾಲಯಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ದಕ್ಷಿಣದಲ್ಲಿರುವ 12 ಗುಹೆಗಳು ಬೌದ್ದ ಧರ್ಮಕ್ಕೂ ಮಧ್ಯದ 17 ಗುಹೆಗಳು ಹಿಂದೂ ಧರ್ಮಕ್ಕೂ ಉತ್ತರದ ಅಂಚಿನ 5 ಗುಹೆಗಳು ಜೈನ ಧರ್ಮಕ್ಕೂ ಸೇರುತ್ತವೆ.

ಕ್ರಿ. ಶ. 350-650ರ ಮಧ್ಯದಲ್ಲಿ ನಿರ್ಮಿತವಾದ ಬೌದ್ಧ ಚೈತ್ಯವಿಹಾರಗಳಲ್ಲಿ ಎರಡು ಗುಂಪುಗಳಿದ್ದು ಮೊದಲ ಐದು ಗುಹೆಗಳು ದೇರ್ವಾರ ಗುಂಪಿಗೂ ಉಳಿದ ಏಳು ಎರಡನೆಯ ಗುಂಪಿಗೂ ಸೇರುತ್ತವೆ. ಮೊದಲ ಗುಂಪಿನ ಗುಹೆಗಳಲ್ಲಿ ಮಹಾನ್ ವಾಡ ಎಂಬ ಕಂಬಗಳಿಂದ ಕೂಡಿದ್ದ ವಿಶಾಲ ಹಜಾರವನ್ನು ಪ್ರಾರ್ಥನಾ ಮಂದಿರವಾಗಿ ಬಳಸುತ್ತಿದ್ದರು. ಎರಡನೆಯ ಗುಂಪಿನ ಚೈತ್ಯ ಮಂದಿರದಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಈ ಎಲ್ಲಾ ಗುಹೆಗಳು ಒಂದಂತಸ್ತಿನವುಗಳಾಗಿದ್ದು ಕೈಸಾಲೆ, ಕಂಬಗಳಿಂದ ಕೂಡಿದ್ದ ಹಜಾರ ಮತ್ತು ಚೈತ್ಯ ಅಥವಾ ಗರ್ಭಗುಡಿಯನ್ನೊಳಗೊಂಡಿರುತ್ತಿದ್ದವು. ಎರಡನೆಯ ಗುಂಪಿನ ಬೌದ್ದ ಗುಹೆಗಳಲ್ಲಿ ವಿಶಾಲವಾದ ವಿಹಾರಗಳಿದ್ದು ಸುಂದರ ಚೈತ್ಯಗಳೂ ಇರುತ್ತಿದ್ದುವು. ಮುಂಭಾಗದಲ್ಲಿ ದೊಡ್ಡ ಪ್ರಾಂಗಣಗಳಿರುತ್ತಿದ್ದವು. ಅವುಗಳಲ್ಲಿ 3 ಗುಹೆಗಳು ಮೂರಂತಸ್ತಿನ ನಿರ್ಮಾಣಗಳಾಗಿವೆ. ತೀನ್ ತಾಲ್ ಅಥವಾ ಮೂರಂತಸ್ತಿನ ಭವನವೆಂದು ಹೆಸರಾದ 12ನೆಯ ಗುಹೆ ಗಮನಾರ್ಹವಾಗಿದೆ. ಸುಮಾರು 40 ಭಿಕ್ಷುಗಳ ವಸತಿಗೆ ಅನುಕೂಲವಿರುವ ಈ ಗುಹೆಯ ಹಜಾರ ಇನ್ನೂ ಅಧಿಕ ಸಂಖ್ಯೆಯ ಭಿಕ್ಷುಗಳು ಪ್ರಾರ್ಥನೆ ಧರ್ಮೋಪದೇಶಗಳಿಗಾಗಿ ಸೇರಲನುಕೂಲವಾಗಿತ್ತು. ಚ್ಯೆತ್ಯಗೃಹದಲ್ಲಿ ಕುಳಿತಿರುವ ಬುದ್ಧ ಮತ್ತು ಇತರ ಮೂರ್ತಿಗಳಿವೆ. ಬೌದ್ಧ ಗುಹೆಗಳಲ್ಲೊಂದಾದ ವಿಶ್ವಕರ್ಮ (10ನೆಯದು) ಗುಹೆ ಸಮಕಾಲೀನ ಅಜಂತದ ಚೈತ್ಯವಿಹಾರಗಳನ್ನು ಹೋಲುತ್ತದೆ.

ಏಳನೆಯ ಶತಮಾನದ ಅಂತ್ಯ ಮತ್ತು ಎಂಟನೆಯ ಶತಮಾನಗಳಲ್ಲಿ ಬೌದ್ಧ ಮತ ಕ್ಷೀಣಿಸುತ್ತಿದ್ದಾಗ ಹಿಂದೂಗಳ ಕಾರ್ಯಾರಂಗ ಇಲ್ಲಿ ಬೆಳೆಯಲಾರಂಭಿಸಿತು. ಬೌದ್ಧ ವಾಸ್ತುಶಿಲ್ಪಗಳ ಮಾದರಿಯಲ್ಲೇ ಆದರೂ ತಮ್ಮ ಸಂಪ್ರದಾಯಕ್ಕನುಸಾರವಾಗಿ ಮಾರ್ಪಡಿಸಿಕೊಂಡ ಈ ಗುಹೆಗಳಲ್ಲಿ 14ನೆಯ ರಾವಣ್-ಕಾ-ಖಾಇ, 15ನೆಯ ದಶಾವತಾರ, 16ನೆಯ ಕೈಲಾಸ, 21ನೆಯ ರಾಮೇಶ್ವರ ಮತ್ತು 29ನೆಯ ದುಮಾರ್ ಲೇನಾ ಅಥವಾ ಸೀತೆಯ ಸ್ನಾನದ ಗುಹೆಗಳು ಮುಖ್ಯವಾದುವು. ಕ್ರಮಾಗತವಾಗಿ ಬದಲಾವಣೆ ಹೊಂದುತ್ತಿದ್ದ ಈ ಗುಹಾಶೈಲಿಗಳಲ್ಲಿ ಮೊದಲನೆಯ ಗುಂಪಿಗೆ ಸೇರುವ ದಶಾವತಾರ ಗುಹೆ ಬೌದ್ಧ ಗುಹೆಗಳನ್ನು ಹೋಲುತ್ತದೆ. ಪ್ರದಕ್ಷಿಣ ಪಥವಿರುವ ರಾಮೇಶ್ವರ ಮತ್ತು ರಾವಣ್-ಕಾ-ಖಾಇ ಎರಡನೆಯ ಹಂತವನ್ನೂ ಶಿಲುಬೆಯಾಕೃತಿಯ ತಳಕಟ್ಟಿನ ಮಧ್ಯದಲ್ಲಿ ಗರ್ಭಗುಡಿಯಿರುವ ಮತ್ತು ಒಂದಕ್ಕಿಂತಲೂ ಹೆಚ್ಚು ಪ್ರವೇಶದ್ವಾರಗಳಿರುವ ದುಮಾರ್‍ಲೇನಾ ಗುಹೆ ಮೂರನೆಯ ಹಂತವನ್ನೂ ಕೊನೆಯದಾಗಿ ಗುಹೆಯ ಬದಲು ಕಟ್ಟಿದ ಭವನವನ್ನು ಹೋಲುವ, ಒಂದೇ ಕಲ್ಲಿನಲ್ಲಿ ಕೊರೆಯಲಾದ ಕೈಲಾಸ ದೇವಾಲಯ ನಾಲ್ಕನೆಯ ಹಂತವನ್ನೂ ಸೂಚಿಸುತ್ತವೆ. ರಾವಣ್-ಕಾ-ಖಾಇ ಗುಹೆಯ ದಕ್ಷಿಣದ ಗೋಡೆಯ ಮೇಲೆ ಮಹಿಷಾಸುರ ಮರ್ದಿನಿ, ತಾಂಡವನೃತ್ಯ, ಮಗ್ನಶಿವ, ಕೈಲಾಸಪರ್ವತವನ್ನೆತ್ತುತ್ತಿರುವ ರಾವಣ, ಪಗಡೆಯಾಟದಲ್ಲಿ ತೊಡಗಿರುವ ಶಿವ ಪಾರ್ವತಿ ಮುಂತಾದ ಸುಂದರ ಶೈವಶಿಲ್ಪಗಳೂ ಉತ್ತರದ ಗೋಡೆಯ ಮೇಲೆ ದುರ್ಗೆ, ಲಕ್ಷ್ಮಿ, ವರಾಹ, ಲಕ್ಷ್ಮೀನಾರಾಯಣ ಮುಂತಾದ ವೈಷ್ಣವಶಿಲ್ಪಗಳೂ ಇವೆ. ಹೊರಭಾಗದಲ್ಲಿ ಗಣಪತಿ, ಸಪ್ತಮಾತೃಕೆಯರ ಶಿಲ್ಪಗಳಿವೆ. ದಶಾವತಾರ ಗುಹೆಯಲ್ಲೂ ಅನೇಕ ಉತ್ತಮ ದೇವತಾ ಮೂರ್ತಿಗಳನ್ನು ಕಡೆದಿದ್ದಾರೆ. 

ಇಲ್ಲಿನ ಹಿಂದೂ ದೇವಾಲಯಗಳೆಲ್ಲೆಲ್ಲ ಅಮೋಘವಾದುದು ರಾಷ್ಟ್ರಕೂಟ ದೊರೆ ಮೊದಲನೆಯ ಕೃಷ್ಣನ (ಕ್ರಿ. ಶ. 756-775) ಆಶ್ರಯದಲ್ಲಿ ನಿರ್ಮಿಸಲ್ಪಟ್ಟು ಶಿವನ ವಾಸಸ್ಥಾನವಾದ ಕೈಲಾಸಪರ್ವತದ ಪ್ರತೀಕವಾಗಿ ಒಂದೇ ಶಿಲೆಯಲ್ಲಿ ಕಡೆಯಲಾಗಿರುವ ಕೈಲಾಸ ದೇವಾಲಯ. ಇದನ್ನು ಅತ್ಯಮೋಘವಾದ ಧಾರ್ಮಿಕ ಸಾಧನೆಯೆಂದೂ ಮಾನವನ ಮನಸ್ಸು ಹೃದಯ ಮತ್ತು ಕರಗಳು ಒಂದು ಉದಾತ್ತ ಧ್ಯೇಯ ಸಾಧನೆಗೆ ಒಮ್ಮುಖವಾಗಿ ಶ್ರಮಿಸಿರುವುದರ ನಿದರ್ಶನವೆಂದೂ ಪರ್ಸಿ ಬ್ರೌನ್ ಶ್ಲಾಘಿಸಿದ್ದಾನೆ. 25' ಎತ್ತರದ ಜಗತ್ತಿನ ಮೇಲೆ ಇರುವ 150' + 100' ವಿಶಾಲವಾದ ಈ ಮಂದಿರ ಆನೆ ಮತ್ತು ಸಿಂಹಗಳ ಸಾಲುಗಳಿಂದಲಂಕೃತವಾಗಿದೆ. ಎರಡಂತಸ್ತಿನ ಗುಡಿಗೆ ಸೇರಿದಂತೆ ಸಣ್ಣ ದೇವತಾ ಗೃಹಗಳೂ ವಿಹಾರಗಳೂ ಇದ್ದು ಹೊರಭಾಗದ ಮಹಾದ್ವಾರದೊಂದಿಗೆ ಕಲ್ಲಿನ ಸೇತುವೆಯ ಮೂಲಕ ಸಂಪರ್ಕ ಪಡೆದಿದೆ. 95 ಅಡಿಗಳೆತ್ತರದ ಈ ದೇವಾಲಯದ ವಿಮಾನದಲ್ಲಿ ಮೂರಂತಸ್ತುಗಳಿವೆ. ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನು ಕೆತ್ತಲಾಗಿದೆ. ಮುಂಭಾಗದಲ್ಲಿ 50 ಅಡಿಗಳೆತ್ತರದಲ್ಲಿ ನಂದೀ ಮಂಟಪವೂ ಅದರ ಇಕ್ಕೆಲೆಗಳಲ್ಲಿ ಧ್ವಜಸ್ತಂಭಗಳೂ ನಿರ್ಮಿತವಾಗಿವೆ. ಕೈಲಾಸ ದೇವಾಲಯದಿಂದ ಉತ್ತರಕ್ಕೆ 1 1/2 ಮೈಲಿಗಳ ದೂರದಲ್ಲಿರುವ, ಪ್ರಾಯಶಃ 9ನೆಯ ಶತಮಾನದಲ್ಲಿ ನಿರ್ಮಿತವಾದ, 5 ಜೈನಗುಹೆಗಳಲ್ಲಿ ಮುಖ್ಯವಾದುವು ಇಂದ್ರ ಸಭಾ ಮತ್ತು ಜಗನ್ನಾಥಗುಹೆಗಳು.

(ಬಿ.ಕೆ.ಜಿ.; ಕೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ